ಗ್ರಾಮೀಣ ಆಚರಣೆಗಳಿಂದ ಸಂಭ್ರಮದ ವಾತಾವರಣ
ಶಿವಮೊಗ್ಗ: ಗ್ರಾಮೀಣ ಪ್ರದೇಶಗಳಲ್ಲಿ ಆಚರಣೆ ಪರಂಪರೆಗಳನ್ನು ಉಳಿಸಿ ಬೆಳೆಸಿಕೊಂಡು ಹೋಗಬೇಕಾದ ಜವಾಬ್ದಾರಿ ನಮ್ಮ ಮೇಲಿದೆ ಎಂದು ಫ್ರೆಂಡ್ಸ್ ಸೆಂಟರ್ ಅಧ್ಯಕ್ಷ ಎಚ್.ಕೆ.ಲೋಕೇಶ್ ಅನಿಸಿಕೆ ವ್ಯಕ್ತಪಡಿಸಿದರು.
ನಗರದ ಗೋಪಾಳ ಬಡಾವಣೆಯ ಫ್ರೆಂಡ್ಸ್ ಸೆಂಟರ್ ನೂತನ ಕಟ್ಟಡದಲ್ಲಿ ಆಯೋಜಿಸಿದ್ದ ಬೆಳದಿಂಗಳ ಕಾರ್ಯಕ್ರಮ, ಸಾಧಕರಿಗೆ ಸನ್ಮಾನ, ಜಾನಪದ ಸಂಜೆ, ಹಳೆಯ ಚಿತ್ರಗೀತೆಗಳ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಬೆಳದಿಂಗಳು ಎಂದರೆ ಸಂಭ್ರಮದ ವಾತಾವರಣ. ಬೆಳದಿಂಗಳ ಕಾರ್ಯಕ್ರಮಗಳು ಗ್ರಾಮೀಣ ಪ್ರದೇಶದಲ್ಲಿ ಹೆಚ್ಚು ಮಹತ್ವ ಪಡೆದಿದೆ. ತಂತ್ರಜ್ಞಾನ ಮುಂದುವರೆದಂತೆ ಸಂಸ್ಕೃತಿ ಮೇಲಿನ ಆಸಕ್ತಿ ಕಡಿಮೆ ಆಗುತ್ತಿದೆ. ಆದರೆ ಗ್ರಾಮೀಣ ಕ್ರೀಡೆ, ಕಲೆ, ಆಚರಣೆಗಳನ್ನು ಎಲ್ಲರೂ ಸೇರಿ ಅನುಸರಿಸಲು ಮುಂದಾಗಬೇಕು ಎಂದು ತಿಳಿಸಿದರು.
ಫ್ರೆಂಡ್ಸ್ ಸೆಂಟರ್ ಮಾಜಿ ಅಧ್ಯಕ್ಷ ವಿ.ನಾಗರಾಜ್ ಮಾತನಾಡಿ, ನಮ್ಮ ಸಂಸ್ಥೆಯು ಐದು ದಶಕಗಳಿಂದ ಸಾಮಾಜಿಕ ಸೇವಾ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದು, ವೈವಿಧ್ಯ ಕಾರ್ಯ ಚಟುವಟಿಕೆಗಳನ್ನು ನಡೆಸಿಕೊಂಡು ಬರುತ್ತಿದೆ. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಗೌರವಿಸುವ ಕೆಲಸ ಮಾಡುತ್ತಿದೆ ಎಂದರು.
ಇದೇ ಸಂದರ್ಭದಲ್ಲಿ ಫ್ರೆಂಡ್ಸ್ ಸೆಂಟರ್ ಮಾಜಿ ಅಧ್ಯಕ್ಷ, ನೇತ್ರ ಭಂಡಾರದ ಕಾರ್ಯದರ್ಶಿ ಜಿ.ವಿಜಯಕುಮಾರ್ ಮಾತನಾಡಿ, ಸದಸ್ಯರ ಪ್ರತಿಭೆ ಅನಾವರಣಗೊಳಿಸಲು ಬೆಳದಿಂಗಳ ಕಾರ್ಯಕ್ರಮ ಸೂಕ್ತ ವೇದಿಕೆಯಾಗಿದೆ. ಇಂತಹ ವೇದಿಕೆಗಳು ಪರಸ್ಪರರಲ್ಲಿ ವಿಶ್ವಾಸ ವೃದ್ಧಿಸುತ್ತದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಆಕಾಶವಾಣಿ ಕಲಾವಿದ ವಸಂತ ಮಾಧವ, ಪ್ರತಿಮಾ ಮಾಧವ, ಶುಭಾ ಹರ್ಷ ಅವರನ್ನು ಸನ್ಮಾನಿಸಲಾಯಿತು. ಜಿ.ವಿಜಯಕುಮಾರ್ ತಂಡದಿಂದ ಹಳೆಯ ಚಿತ್ರಗೀತೆಗಳ ಗಾಯನ ನಡೆಸಲಾಯಿತು.
ಕಾರ್ಯದರ್ಶಿ ರವೀಂದ್ರನಾಥ ಐತಾಳ್, ಮಲ್ಲಿಕಾರ್ಜುನ ಕಾನೂರು, ಮೋಹನ್, ಮಾಜಿ ಅಧ್ಯಕ್ಷ ಜಿ.ಸತ್ಯನಾರಾಯಣ, ವೀಣಾ ಗೋಪಾಲ್, ವೀಣಾ ಲೋಕೇಶ್, ಫ್ರೆಂಡ್ಸ್ ಸೆಂಟರ್ ಮಹಿಳಾ ವಿಭಾಗದ ಅಧ್ಯಕ್ಷ ಸುನೀತಾ ಮೋಹನ್, ಮಾಜಿ ಅಧ್ಯಕ್ಷೆ ಬಿಂದು ವಿಜಯಕುಮಾರ್ ಹಾಗೂ ಸದಸ್ಯರು ಉಪಸ್ಥಿತರಿದ್ದರು.
ವರದಿ ಮೆಟ್ರೋ ನ್ಯೂಸ್