ಮದುವೆ ಸಭೆ ಸಮಾರಭಗಳಲ್ಲಿ ರಾಗಿ ಮುದ್ದೆ ತಣ್ಣಗಾಗದಂತೆ ಬಿಸಿಯಾಗಿರಲು ಪ್ಲಾಸ್ಟಿಕ್ ಬಳಕೆ
ವಿಶೇಷವರದಿ
ವರದಿ ನಾರಾಯಣಸ್ವಾಮಿ ಸಿ.ಎಸ್
ಹೊಸಕೋಟೆ :
ನಿಷೇಧಿತ ಏಕಬಳಕೆ ಪ್ಲಾಸ್ಟಿಕ್ ವಸ್ತುಗಳ ಮಾರಾಟ ಹಾಗೂ ಬಳಕೆ ನಿರ್ಬಂಧಿಸಿದ್ದರೂ ಜಿಲ್ಲೆಯಾದ್ಯಂತ ಪ್ಲಾಸ್ಟಿಕ್ ವಸ್ತುಗಳ ಮಾರಾಟ ಆವ್ಯಾಹತವಾಗಿ ನಡೆಯುತ್ತಿದೆ.
ಇಡ್ಲಿ ಇತ್ಯಾದಿ ಆಹಾರ ಪದಾರ್ಥಗಳ ತಯಾರಿಕೆಯಲ್ಲಿ ಇದರ ಬಳಕೆ ಹೆಚ್ಚಾಗಿದ್ದು, ಕೇಟರಿಂಗ್ ಮೂಲಕ ವಿತರಣೆಯಾಗುವ ಆಹಾರದಲ್ಲಿ ರಾಗಿ ಮುದ್ದೆ ತಣ್ಣಾಗಾಗದಂತೆ ಬಿಸಿಯಾಗಿಡಲು ಪ್ಲಾಸ್ಟಿಕ್ ಪೇಪರ್ ನಲ್ಲಿ ಸುತ್ತಿ ಬಡಿಸುತ್ತಿರುವುದು ತೀವ್ರ ಕಳವಳಕಾರಿಯಾಗಿದೆ.
ಜಿಲ್ಲೆಯಾದ್ಯಂತ ಸಾಕಷ್ಟು ಅಂಗಡಿಗಳಲ್ಲಿ ನಿತ್ಯ ಬಳಕೆ ವಸ್ತುಗಳನ್ನು ಖರೀದಿಸಿದ ನಂತರ ಜನರು ಮನೆಗೆ ತೆಗೆದುಕೊಂಡು ಹೋಗಲು ಅಂಗಡಿ ಮಾಲೀಕರು ರಾಜಾರೋಷವಾಗಿ ನಿಷೇಧಿತ ಪ್ಲಾಸ್ಟಿಕ್ ಕವರ್ಗಳನ್ನು ಯಥೇಚ್ಚವಾಗಿ ಬಳಕೆ ಮಾಡುತ್ತಿರುವುದು ಹೆಚ್ಚಾಗಿ ಕಂಡುಬರುತ್ತಿದೆ.
ಸರಕಾರ ಏಕಬಳಕೆ ಪ್ಲಾಸ್ಟಿಕ್ ವಸ್ತುಗಳ ಮಾರಾಟ, ಸಾಗಟ ನಿಷೇಧಿಸಿದ್ದರೂ ಇದನ್ನು ತಡೆಯುವ ಕಾರ್ಯಕ್ಕೆ ಸರಕಾರ ಮುಂದಾಗದಿರುವುದು ಪ್ಲಾಸ್ಟಿಕ್ ಮಾರಾಟ ಪ್ರಮಾಣ ಹೆಚ್ಚಲು ಕಾರಣವಾಗುತ್ತಿದೆ.
ಕಣ್ಣು ಮುಚ್ಚಿ ಕುಳಿತ ಸರಕಾರ:
ಏಕಬಳಕೆ ಪ್ಲಾಸ್ಟಿಕ್ ವಸ್ತುಗಳ ಮಾರಾಟ, ಸಾಗಾಟ ತಡೆಯುವುದು ಸ್ಥಳೀಯ ನಗರಸಭೆ, ಪುರಸಭೆ, ಪ.ಪಂ.ಹಾಗೂ ಗ್ರಾ.ಪಂ.ಆಡಳಿತದ ಜವಾಬ್ದಾರಿಯಾಗಿದೆ.
ಆದರೆ ಇವು ಕಣ್ಣು ಮುಚ್ಚಿ ಕುಳಿತಿವೆ.
ಕೆಲವೊಮ್ಮೆ ಕಾಟಾಚಾರಕ್ಕೆ ದಾಳಿ ನಡೆಸಿ ಕೈ ತೊಳೆದು ಕೊಳ್ಳುತ್ತಿರುವುದು ಬಿಟ್ಟರೆ ಮಾರಾಟವನ್ನು ಮಾರಾಟ ಪೂರ್ಣ ಪ್ರಮಾಣದಲ್ಲಿ ತಡೆಯುವ ಕಾರ್ಯಕ್ಕೆ ಮುಂದಾಗಿಲ್ಲ.
ಪ್ಲಾಸ್ಟಿಕ್ ಪರಿಸರ, ಮನುಷ್ಯ, ಪ್ರಾಣಿ ಪಕ್ಷಿಗಳ, ಕುಡಿಯವ ನೀರಿನ ಮೂಲಗಳು, ಜಲಚರಗಳ ಮೇಲೆ ವ್ಯತಿರಿಕ್ತ ದುಷ್ಪರಿಣಾಮ ಬೀರುತ್ತಿದ್ದರೂ ಅಧಿಕಾರಿಗಳು ತಮಗೆ ಸಂಬಂಧವೇ ಇಲ್ಲದ ವಿಷಯ ಎಂದು ಕೈಕಟ್ಟಿ ಕುಳಿತಿರುವುದು ಕಳವಳಕಾರಿಯಾಗಿದೆ.
ಕೇಂದ್ರ ಸರಕಾರದ ಅರಣ್ಯ, ಪರಿಸರ ಮತ್ತು ಹವಾಮಾನ ಬದಲಾವಣೆ ಸಚಿವಾಲಯ ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆ ನಿಯಮ 2016ರ ತಿದ್ದುಪಡಿ, 2021 ರನ್ವಯ ನಿಷೇಧಿತ ಏಕಬಳಕೆ ಪ್ಲಾಸ್ಟಿಕ್ ವಸ್ತುಗಳ ತಯಾರಿಕೆ, ಸರಬರಾಜು, ಸಂಗ್ರಹಣೆ, ಸಾಗಾಣಿಕೆ, ಮಾರಾಟ ಮತ್ತು ವಿತರಣೆ ನಿರ್ಬಂಧಿಸಿ 2022ರಲ್ಲಿ ಅಧಿಸೂಚನೆ ಜಾರಿಗೊಳಿಸಿದೆ. ಆದರೆ, ನಿಷೇಧಿತ ಏಕಬಳಕೆ ವಸ್ತುಗಳನ್ನು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿರುವುದು.
ಬಳಸುತ್ತಿರುವುದು ಹೆಚ್ಚಾಗಿದೆ.
ರಾಗಿ ಮುದ್ದೆಗೂ ಪ್ಲಾಸ್ಟಿಕ್! ಮದುವೆ, ಸಭೆ, ಸಮಾರಂಭಗಳಲ್ಲಿ ಜನರಿಗೆ ಕೇಟರಿಂಗ್ ಮೂಲಕ ಊಟದ ವ್ಯವಸ್ಥೆ ಮಾಡುವ ಪದ್ಧತಿ ನಗರ ಮಾತ್ರವಲ್ಲದೆ, ಗ್ರಾಮೀಣ ಭಾಗದಲ್ಲೂ ಹೆಚ್ಚುತ್ತಿದೆ.
ಕೇಟರಿಂಗ್ ಮೂಲಕ ಪೂರೈಕೆಯಾಗುವ ಊಟದಲ್ಲಿ ಮುದ್ದೆ ತಣ್ಣಾಗದಂತೆ ಬಿಸಿಯಾಗಿರಲು ನಿಷೇಧಿತ ಏಕಬಳಕೆ ಪ್ಲಾಸ್ಟಿಕ್ ಕವರ್ನಲ್ಲಿ ಸುತ್ತಿ ಊಟಕ್ಕೆ ಬಡಿಸಲಾಗುತ್ತಿದೆ. ಹೋಳಿಗೆಯನ್ನು ಪ್ಲಾಸ್ಟಿಕ್ ಕವರ್ನಲ್ಲಿ ಸುತ್ತಿ ಬಡಿಸಲಾಗುತ್ತಿದೆ.
ಹೋಟೆಲ್ ಗಳಲ್ಲಿ ಇಡ್ಲಿ ಬೇಯಿಸಲು ತಟ್ಟೆಯ ತಳಭಾಗಕ್ಕೆ ಪ್ಲಾಸ್ಟಿಕ್ ಬಳಸಲಾಗುತ್ತಿದೆ. ಸಾಕಷ್ಟು ಹೋಟೆಲ್ಗಳಲ್ಲಿ ತಟ್ಟೆಯ ತಳಭಾಗಕ್ಕೆ ಪ್ಲಾಸ್ಟಿಕ್ ಕವರ್ ಹಾಕಿ ಊಟ, ಟಿಫನ್ ನೀಡಲಾಗುತ್ತಿದೆ. ಪ್ಲಾಸ್ಟಿಕ್ ಮೇಲೆ ಬಿಸಿ ಆಹಾರ ಪದಾರ್ಥ ಹಾಕುವುದರಿಂದ ಆಹಾರದಲ್ಲಿ ಬೆರೆತ ಪ್ಲಾಸ್ಟಿಕ್ ಮನುಷ್ಯ ಹೊಟ್ಟೆಗೆ ಸೇರಿ ಕ್ಯಾನ್ಸರ್ ನಂತಹ ಮಾರಕ ಕಾಯಿಲೆಗಳು ಸದ್ದಿಲ್ಲದೆ ಆವರಿಸಿಕೊಳ್ಳುತ್ತಿವೆ.
ಜಿಲ್ಲೆಯಲ್ಲಿ ಬೀಳುವುದೇ ಕಡಿವಾಣ?
ನಿಷೇಧಿತ ಪ್ಲಾಸ್ಟಿಕ್ ಬಳಕೆ ಹೆಚ್ಚಾಗಿರುವುದನ್ನು ಗಂಭೀರವಾಗಿ ತೆಗೆದುಕೊಂಡಿರುವ ಅರಣ್ಯ ಪರಿಸರ ಮತ್ತು ಜೀವಶಾಸ್ತ್ರ ಇಲಾಖೆ ಅಧಿಕಾರಿಗಳು, ಇದರ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮ ಜರುಗಿಸಲು ಜಿಲ್ಲಾಡಳಿತಕ್ಕೆ ತಾಪಂ ಇಒ, ಗ್ರಾಪಂ ಪಿಡಿಒ ಗಳ ನೇತೃತ್ವದಲ್ಲಿ ತಂಡಗಳನ್ನು ರಚಿಸಿ, ನಿಷೇಧಿತ ಏಕಬಳಕೆ ವಸುಗಳನ್ನು ಸಂಗ್ರಹಿಸುತ್ತಿರುವ ಹಾಗೂ ಉತ್ಪಾದಿಸುತ್ತಿರುವ ಮತ್ತು ಮಾರಾಟ ಮಾಡುತ್ತಿರುವ ಮಳಿಗೆ, ಕಾರ್ಖಾನೆಗಳ ಮೇಲೆ ದಾಳಿ ನಡೆಸಿ ಪ್ಲಾಸ್ಟಿಕ್ ಕಂಡು ಬಂದಲ್ಲಿ ಜಪ್ತಿ ಮಾಡಿ, ದಂಡ ಹಾಗೂ ಅವರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಸೂಚನೆ ನೀಡಿದೆ.
ಆದರೆ, ಈ ಕಾರ್ಯ ಎಷ್ಟರಮಟ್ಟಿಗೆ ನಡೆಯುತ್ತೆ ಎಂಬುದು ಯಕ್ಷ ಪ್ರಶ್ನೆಯಾಗಿದೆ.
ನಿಷೇಧಿತ ಏಕಬಳಕೆ ಪ್ಲಾಸ್ಟಿಕ್ ವಸ್ತುಗಳ ಮಾರಾಟದ ಬಗ್ಗೆ ಸೂಕ್ತ ಕ್ರಮ ಕೈಗೊಂಡು ಇದಕ್ಕೆ ಕಡಿವಾಣ ಹಾಕುವಂತೆ ಈಗಾಗಲೇ ಜಿಲ್ಲೆಯ ಎಲ್ಲ ಗ್ರಾಮ ಪಂ ಗಳಿಗೆ ಸೂಚನೆ ನೀಡಲಾಗಿದೆ.
ಇದರ ನಿಯಂತ್ರಣಕ್ಕೆ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುವುದು.
ಡಾ. ಕೆ.ಎನ್. ಅನುರಾಧ | ಜಿಪಂ ಸಿಇಒ