ಉಡುಪಿ : ಕುಂದಾಪುರ ತಾಲ್ಲೂಕಿನ ತೆಕ್ಕಟ್ಟೆಯಲ್ಲಿ ಸತೀಶ್ ತೆಕ್ಕಟ್ಟೆ ಎಂದರೆ ಎಲ್ಲರಿಗೂ ಪರಿಚಯ ಯಾರು ಕೇಳಿದರೂ ಪರಿಚಯ ಇರುವ ಇವರು ಅದೆಷ್ಟೋ ಜನರಿಗೆ ಸಹಾಯವಾದ ತೆಕ್ಕಟ್ಟೆ ಭಾಗದ ಜನಪರ, ಜನ ಸ್ನೇಹಿ, ಯಾವುದೇ ಸ್ವಾರ್ಥ ಮನೋಭಾವನೆ ಇಲ್ಲದೆ ಸೇವೆಯನ್ನು ಸಲ್ಲಿಸಿದ ನಿಷ್ಕಲ್ಮಶ ವ್ಯಕ್ತಿ ಇದ್ದರೆ ಅವರೇ ಸತೀಶ್ ತೆಕ್ಕಟ್ಟೆ,
ತನ್ನ ಸ್ವಂತ ಸಮಸ್ಯೆಯನ್ನು ಯಾರ ಜೊತೆಯೂ ಹಂಚಿಕೊಳ್ಳದೆ ತಾನೊಬ್ಬರೇ ಎಲ್ಲವನ್ನು ನಿಭಾಯಿಸಿಕೊಂಡು ತನ್ನ ಬಡತನವನ್ನು ಎಲ್ಲಿಯೂ ತೋರ್ಪಡಿಸಿಕೊಳ್ಳದೆ ತನ್ನ ಅಂತರಾಳದಲ್ಲಿಟ್ಟುಕೊಂಡು ಆ ಬಿಸಿ ಬೇಗೆಯಲ್ಲಿ ತಾನು ಬೆಂದರು ಬೇರೆಯವರ ಕಷ್ಟಕ್ಕೆ ಬೆನ್ನೆಲುಬಾಗಿ ನಿಲ್ಲುವವರು ನಮ್ಮ ಸತೀಶ್ ತೆಕ್ಕಟ್ಟೆ. ಅಂತಹದರಲ್ಲಿ ಸತೀಶ್ ತೆಕ್ಕಟ್ಟೆ ಇವರು ಸುಮಾರು ಆರು ತಿಂಗಳಿಂದ ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದು ದಿನಾಂಕ 27.08.2024 ರಂದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಇವರ ಈ ಅಗಲಿಕೆಯು ಅದೆಷ್ಟೋ ಜನರ ಮನಸ್ಸಿಗೆ ನೋವಾಗಿದೆ ಅದೆಷ್ಟೋ ಗೆಳೆಯರನ್ನು ಅಲ್ಲದೆ ನೆರೆಕೆರೆಯವರನ್ನು ಅಗಲಿದ್ದಾರೆ ಇವರ ಈ ಅಗಲಿಕೆಯಿಂದ ಗೆಳೆಯರೆಲ್ಲರಿಗೂ ತನ್ನ ಗೆಳೆಯನನ್ನು ಕಳೆದುಕೊಂಡ ನೋವಿನ ಅಧ್ಯಾಯವಾಗಿ ಎಲ್ಲರ ಮನಸ್ಸಿನಲ್ಲಿ ಉಳಿದವರೇ ನಮ್ಮ ಗೆಳೆಯರಾದ ಸತೀಶ್ ತೆಕ್ಕಟ್ಟೆ.
ಸತೀಶ್ ತೆಕಟ್ಟೆಯವರನ್ನು ನೆರವು ಕೇಳಿ ಹುಡುಕಿಕೊಂಡು ಬಂದಾಗ ಅದೆಷ್ಟೋ ಜನರು ಬೇರೆ ಬೇರೆ ಕಾಯಿಲೆಯಿಂದ ಬಳಲುತ್ತಿದ್ದ ರೋಗಿಗಳನ್ನು ಚಿಕಿತ್ಸೆಗಾಗಿ ವಿವಿಧ ಆಸ್ಪತ್ರೆಗಳಿಗೆ ದಾಖಲಿಸಿ ಆಯುಷ್ಮಾನ್ ಹಾಗೂ ಸರ್ಕಾರದ ಯೋಜನೆಯಲ್ಲಿ ಸಿಗುವ ಸೌಲಭ್ಯಗಳನ್ನು ಕೊಡಿಸುವಲ್ಲಿ ಹಲವರಿಗೆ ಸಹಕಾರಿಯಾಗಿರುತ್ತಾರೆ.
ಇವರು ದಲಿತ ಸಂಘಟನೆಯಲ್ಲಿ ಸಕ್ರಿಯವಾಗಿ ಕಾರ್ಯನಿರತಾಗಿರುತ್ತಾರೆ. ಇವರು ಅನಾರೋಗ್ಯದಿಂದ ಬಳಲುತ್ತಿರುವ ತಂದೆ ತಾಯಿ ಹಾಗೂ ಒಬ್ಬಳು ಮಾನಸಿಕ ಅಸ್ವಸ್ಥ ಸೇರಿ ಮೂರು ಜನ ಸಹೋದರಿಯನ್ನು ಅಗಲಿರುತ್ತಾರೆ; ಮನೆಗೆ ಆಧಾರ ಸ್ತಂಭವಾಗಿದ್ದ ಸತೀಶ್ ತೆಕ್ಕಟ್ಟೆ ಯವರ ಅಗಲಿಕೆಯಿಂದ ಮನೆಯವರ ಪರಿಸ್ಥಿತಿ ನೀರಿನಿಂದ ಹೊರ ತೆಗೆದ ಮೀನಿನಂತೆ ಆಗಿರುತ್ತಾರೆ. ಇಡೀ ಗ್ರಾಮದಲ್ಲಿ ಇವರ ಮನೆ ಅತಿ ದುರ್ವ್ಯವಸ್ಥೆಯಲ್ಲಿರುವ ಮನೆಯಾಗಿರುತ್ತದೆ.
ಸತೀಶ್ ತೆಕ್ಕಟ್ಟೆ ಇವರಿಗೆ ಕ್ಯಾನ್ಸರ್ ನಂತಹ ಮಾರಕ ಕಾಯಿಲೆಯೊಂದು ತುತ್ತಾಗಿದ್ದರಿಂದ ಈ ಕಾಯಿಲೆಯಿಂದ ಅವರ ಜೀವವನ್ನು ಉಳಿಸಿಕೊಳ್ಳಲು ಅವರ ಕುಟುಂಬದವರು ಧರ್ಮಸ್ಥಳ ಸಂಘ ಹಾಗೂ ಇತರ ಬ್ಯಾಂಕುಗಳಲ್ಲಿ ಸಾಲವನ್ನು ಮಾಡಿದ್ದು ಇವರ ಕುಟುಂಬ ಈಗ ಸಾಲದ ಹೊರೆಯಲ್ಲಿಯೇ ಬಿದ್ದಿದೆ. ಆದ್ದರಿಂದ ಸಾರ್ವಜನಿಕರ ಸಹಾಯ ಹಸ್ತ ಈ ಕುಟುಂಬಕ್ಕೆ ಅಗತ್ಯ ಇದ್ದು ಇವರಿಗೆ ಎಲ್ಲರೂ ಸಹಕಾರ ನೀಡಬೇಕೆಂದು ಕೇಳಿಕೊಳ್ಳುತ್ತಿದ್ದೇವೆ.
🙏ಇತಿ ನಮ್ಮ ಗೆಳೆಯನ ಕುಟುಂಬದ ರಕ್ಷಣೆ ಹೊತ್ತ ತೆಕಟ್ಟೆ ಗೆಳೆಯರ ಬಳಗ🙏
ವರದಿ ಆರತಿ ಗಿಳಿಯಾರು