ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ತಕ್ಷಣ ಬಲಿಷ್ಠ ಭೂ ಮಾಲೀಕರು ಕುಮ್ಕಿ ಹಕ್ಕಿಗಾಗಿ ಹೋರಾಟ ನಡೆಸುತ್ತಿರುವುದನ್ನು ನಾವಿಂದು ಕಾಣಬಹುದು.
ಭೂಮಿ ಹಕ್ಕಿಗಾಗಿ ಹೋರಾಟ ತಪ್ಪಲ್ಲ. ಆದರೆ ಬಲಿಷ್ಠ ಭೂಮಾಲೀಕರೇ ಮತ್ತೆ ಮತ್ತೆ ಭೂಮಿಗಾಗಿ ಹೋರಾಟ ನಡೆಸುತ್ತಿರುವುದು ಸರ್ವಥಾ ಖಂಡನೀಯ. ಇದನ್ನು ಸರಕಾರ ಗಂಭೀರ ವಾಗಿ ಪರಿಗಣಿಸಬೇಕು
ಹತ್ತಾರು ಎಕರೆ ಭೂಮಿ ಹೊಂದಿರುವ ಭೂ ಮಾಲೀಕರು ತಮ್ಮ ಪಟ್ಟಾ ಸ್ಥಳದ ಸುತ್ತ ಮುತ್ತ ನಾಲ್ಕು ದಿಕ್ಕುಗಳಲ್ಲಿರುವ ಹತ್ತಾರು ಎಕರೆ ಸರಕಾರಿ ಜಾಗಕ್ಕೆ, ಡಿಸಿ ಮನ್ನಾ ಭೂಮಿಗೆ ಬೇಲಿ ಹಾಕಿ ಹಕ್ಕಿಗಾಗಿ ಹೋರಾಟ ನಡೆಸುತ್ತಿದ್ದಾರೆ.
ಇಲ್ಲಿ ಕುಮ್ಕಿ ಹಕ್ಕು ಕೇಳುವ ಯಾವುದೇ ವ್ಯಕ್ತಿಗೆ ಹಿಂದೆ ಸರಕಾರದಿಂದ ಎಷ್ಟು ಎಕರೆ ಜಮೀನು ಮಂಜೂರಾಗಿದೆ ಅನ್ನುವುದನ್ನು ಮೊದಲು ಸರಕಾರ ಗಂಭೀರವಾಗಿ ಪರಿಶೀಲಿಸಬೇಕು. ಹಿಂದೆ ಸರಕಾರದಿಂದ ಕನಿಷ್ಠ ಒಂದು ಎಕರೆಗೂ ಮಿಕ್ಕಿ ಸರಕಾರಿ ಭೂಮಿ ಮಂಜುರಾಗಿದ್ದರೆ ಅಂಥವರಿಗೆ ಯಾವುದೇ ಕಾರಣಕ್ಕೂ ಮತ್ತೆ ಕುಮ್ಕಿ ರೂಪದಲ್ಲಿ ಸರಕಾರಿ ಭೂಮಿ ಕೊಡಬಾರದು.
ಕೆಲವು ಕಡೆ ಡಿಸಿ ಮನ್ನಾ ಭೂಮಿ ಕೂಡ ಕುಮ್ಕಿ ಹೆಸರಲ್ಲಿ ಅತಿಕ್ರಮಣ ಆಗಿದ್ದು ಇಂತಹ ಭೂಮಿಯನ್ನು ತೆರವುಗೊಳಿಸಿ ನಿವೇಶನ ರಹಿತ ದಲಿತ ಮತ್ತು ಕೊರಗ ಕುಟುಂಬಗಳಿಗೆ, ಹಂಚುವ ಕೆಲಸ ಕಾಂಗ್ರೆಸ್ ಸರಕಾರದಿಂದ ತುರ್ತು ಆಗಬೇಕು.*
ಉಡುಪಿ ಜಿಲ್ಲೆಯಲ್ಲಿ ಸರಕಾರದ ಬಳಿ ಈಗ ಉಳಿದಿರುವ ಹೆಚ್ಚಿನ ಭೂಮಿ ಕುಮ್ಕಿ ಮತ್ತು ಡಿಸಿ ಮನ್ನಾ ಜಮೀನೇ ಹೊರತು ಬೇರೆ ಸರಕಾರಿ ಭೂಮಿ ತುಂಬಾ ಕಡಿಮೆ. ಅಲ್ಲದೆ ಈಗಾಗಲೇ ಪಕ್ಕದ ಚಿಕ್ಕಮಂಗಳೂರು ಜಿಲ್ಲೆಯಲ್ಲಿ ಇಪ್ಪತ್ತೈದು ಎಕರೆ ಕುಮ್ಕಿ ಅಂದರೆ ಸರಕಾರಿ ಭೂಮಿ ಅಕ್ರಮವಾಗಿ ಹೊಂದಿದವರಿಗೆ ಮೂವತ್ತು ವರ್ಷಗಳ ಕಾಲ ಬಾಡಿಗೆ ನೀಡುವ ಪ್ರಸ್ತಾಪ ಸರಕಾರದ ಮುಂದಿದೆ. ಇದೇ ಕಾನೂನು ಉಡುಪಿ ಜಿಲ್ಲೆಗೂ ಬಂದರೆ ದಲಿತ ಮತ್ತು ಕೊರಗ ಕುಟುಂಬಗಳಿಗೆ ಭೂಮಿ ಹೊಂದುವ ಕನಸು ತಿರುಕನ ಕನಸಾಗುವುದು ಖಂಡಿತ.
ಇಲ್ಲಿಯವರೆಗೆ ವಾಸಿಸಲು ಬದುಕು ಕಟ್ಟಿಕೊಳ್ಳಲು ದಲಿತರು, ಕೊರಗರು ಭೂಮಿಗಾಗಿ ನಡೆಸುತ್ತಿರುವ ಹೋರಾಟ ಸ್ವಾತಂತ್ರ್ಯ ಸಿಕ್ಕಿ ಎಪ್ಪತ್ತೈದು ವರ್ಷ ಕಳೆದರೂ ಯಾವುದೇ ಸರಕಾರಕ್ಕೆ ಕಾಣಿಸದೇ ಇರುವುದು ದೇಶದ ಮೂಲ ನಿವಾಸಿಗಳ ದೌರ್ಭಾಗ್ಯವೇ ಸರಿ.*ದಲಿತರು ಭೂಮಿ ಕೇಳಿದರೆ ಎರಡು ಮುಕ್ಕಾಲು ಸೆಣ್ಸ್ ಅದೇ ಜಮೀನ್ದಾರರಿಗೆ ಹತ್ತಾರು ಎಕರೆ ಸರಕಾರಿ ಭೂಮಿ! ಹೇಗಿದೆ ನೋಡಿ ದಲಿತರಿಗೆ ಸರಕಾರ ನೀಡುವ ಸಮಾನತೆ ಸಾಮಾಜಿಕ ನ್ಯಾಯ !?
ಗೊತ್ತು ಗುರಿ ಇಲ್ಲದೆ ಸರಕಾರ ಕುಮ್ಕಿ ಹಕ್ಕು ನೀಡಿದರೆ ಭೂ ಮಾಲೀಕರ ಕೈಗೆ ಮತ್ತೆ ಎಕರೆಗಟ್ಟಲೆ ಸರಕಾರಿ ಭೂಮಿ ಸೇರುತ್ತವೆ. ಇದರಿಂದ ಎರಡು ಜಿಲ್ಲೆಗಳ ನಿವೇಶನ, ವಸತಿ ರಹಿತ ದಲಿತ ಮತ್ತು ಕೊರಗ ಕುಟುಂಬಗಳು ಹಾಗೂ ಎಲ್ಲಾ ಜಾತಿಯ ಬಡ ನಿವೇಶನ ರಹಿತ ಕುಟುಂಬಗಳು ಬೀದಿ ಬೀದಿಗಳಲ್ಲಿ ಟೆಂಟ್ ಹಾಕಿಕೊಂಡು ಜೀವಿಸ ಬೇಕಾದ ಪರಿಸ್ಥಿತಿ ಬಂದೊದಗುವುದು ನಿಶ್ಚಿತ.
ಈ ವಾಸ್ತವ ಸತ್ಯವನ್ನು ಸರಕಾರ ಗಂಭೀರವಾಗಿ ಪರಿಗಣಿಸಿ ದಲಿತ ಮತ್ತು ಕೊರಗ ಸಮುದಾಯಕ್ಕೆ ನ್ಯಾಯ ಒದಗಿಸದೆ ಹೋದಲ್ಲಿ ಜಿಲ್ಲೆಯಲ್ಲಿ ಭೂಮಿ ಹಕ್ಕಿಗಾಗಿ ಬ್ರಹತ್ ಚಳುವಳಿಯನ್ನು ಹಮ್ಮಿಕೊಳ್ಳಲಾಗುವುದು ಎಂದು ನಿಷ್ಠಾವಂತ ದಲಿತ ಮುಖಂಡರು ಮತ್ತು ದಲಿತ ಪರ ಹೋರಾಟಗಾರರದ ಶ್ರೀನಿವಾಸ್ ವಡ್ಡರ್ಸೆ ದಲಿತ ಮುಖಂಡರು ಉಡುಪಿ ಜಿಲ್ಲೆ ಇವರು ಪತ್ರಿಕೆಗೆ ತಿಳಿಸಿರುತ್ತಾರೆ.
ವರದಿ ಆರತಿ ಗಿಳಿಯಾರು.