ಕಾರವಾರ : ಹೊನ್ನಾವರ ಶರಾವತಿ ನದಿಯಿಂದ,ರಾಜಧಾನಿ ಬೆಂಗಳೂರು ಮತ್ತು ಮಧ್ಯ-ಪೂರ್ವ ಕರ್ನಾಟಕ ಭಾಗದ ಜಿಲ್ಲೆಗಳಿಗೆ ಕುಡಿಯುವ ನೀರು ಪೂರೈಸುವ ಮತ್ತು ಕೆರೆ ತುಂಬಿಸುವ ಯೋಜನೆಗೆ ಶರಾವತಿ ನದಿಪಾತ್ರದ ಜನರ ತೀವ್ರ ವಿರೋಧ.
ಈಗ ಲಭ್ಯವಿರುವ ನೀರು ರೈತರ ಜಮೀನಿಯ ನೀರಾವರಿಗೆ ಮತ್ತು ತಾಲ್ಲೂಕಿನ ಜನರ ಕುಡಿಯುವ ನೀರಿನ ಅಗತ್ಯಗಳಿಗೆ ಬಳಕೆ ಆಗುತ್ತಿದೆ. ನೀರಿನ ಅಭಾವದಿಂದ ಸಮುದ್ರದ ಉಪ್ಪುನೀರು ನದಿ ಸೇರುತ್ತಿದೆ. ಅಗತ್ಯಕ್ಕಿಂತ ಹೆಚ್ಚಿನ ಕುಡಿಯುವ ನೀರಿನ ಯೋಜನೆಗಳಿಂದಾಗಿ ಕಳೆದ ಬೇಸಿಗೆಯ ಕೊನೆಯ ದಿನಗಳಲ್ಲಿ ಜೀವನದಿ ಶರಾವತಿಯ ಸಿಹಿನೀರಿಗೆ ಸಮುದ್ರದ ಉಪ್ಪು ನೀರು ಸೇರ್ಪಡೆಯಾಗುತ್ತಿರುವದರಿಂದ ಶರಾವತಿ ನದಿಪಾತ್ರದ ರೈತರು ಈಗ ಆತಂಕದಲ್ಲಿದ್ದಾರೆ.
ಇನ್ನೊಂದೆಡೆ ಶರಾವತಿಯಿಂದ ಕುಡಿಯುವ ನೀರಿನ ಸೌಲಭ್ಯ ಹೊಂದಿರುವ ಹೊನ್ನಾವರ ನಗರ ಮತ್ತು ತಾಲ್ಲೂಕಿನ ಹಲವೆಡೆ ,ಜನರಿಗೆ ಉಪ್ಪು ನೀರು ಕುಡಿಯುವ ಪರಿಸ್ಥಿತಿ ಎದುರಾಗಿದೆ. ಮುಂದಿನ ದಿನಗಳಲ್ಲಿ ಈ ಸಮಸ್ಯೆ ಇನ್ನಷ್ಟು ಉಲ್ಭಣಗೊಳ್ಳುವ ಮೊದಲೇ ಸರ್ಕಾರ ಮತ್ತು ಜಿಲ್ಲಾಡಳಿತ ಎಚ್ಚೆತ್ತುಕೊಂಡು ಈ ಸಮಸ್ಯೆಗೆ ಕಡಿವಾಣ ಹಾಕುವ ಅಗತ್ಯವಿದೆ ಎಂದು ತಿಳಿಸಿದರು.
ಹಿರಿಯ ಸಾಮಾಜಿಕ ಕಾರ್ಯಕರ್ತ, ಶರಾವತಿ ನೆರೆಸಂತ್ರಸ್ತರ ಹಿತರಕ್ಷಣಾ ಸಮಿತಿಯ ಅಧ್ಯಕ್ಷ ಚಂದ್ರಕಾಂತ ಕೊಚರೇಕರ ಅವರು ಇಂದು ಜಿಲ್ಲಾ ಆಡಳಿತದ ಗಮನ ಸೆಳೆದಿದ್ದಾರೆ.ಈ ಬಗ್ಗೆ ಜಿಲ್ಲಾಡಳಿತದ ಮದ್ಯಪ್ರವೇಶಕ್ಕೆ ಆಗ್ರಹ ಪಡಿಸಿರುವ ಅವರು ಜಿಲ್ಲಾಡಳಿತದಿಂದ ವೈಜ್ಞಾನಿಕ ಅಧ್ಯಯನ ನಡೆಸಲು ಅಗತ್ಯ ಕ್ರಮಗಳು ಆಗಬೇಕು ಮತ್ತು ವೈಜ್ಞಾನಿಕವಾಗಿ ಅಧ್ಯಯನ ನಡೆಸದೇ ಶರಾವತಿ ನದಿಯಿಂದ ಬೇರೆ ತಾಲೂಕುಗಳಿಗೆ ಹೊಸದಾಗಿ ಕುಡಿಯುವ ನೀರು ಪೂರೈಸುವ ಮತ್ತು ಏತನೀರಾವರಿ ಯೋಜನೆಗಳಿಗೆ ಜಿಲ್ಲಾಡಳಿತ ಅವಕಾಶ ನೀಡಬಾರದು ಎಂದು ಅವರು ಒತ್ತಾಯ ಪಡಿಸಿದ್ದಾರೆ.
ಜೀವ ನದಿ ಶರಾವತಿಯು ನದಿಪಾತ್ರದ ಸಾವಿರಾರುರೈತರ ಜೀವನಾಡಿಯಾಗಿದೆ. 8ಕ್ಕೂ ಹೆಚ್ಚು ಏತನೀರಾವರಿ ಯೋಜನೆಗಳ ಮೂಲಕ ಇಲ್ಲಿನ ಸಾವಿರಾರು ರೈತರ ಭೂಮಿಗೆ ನೀರುಣಿಸಲಾಗುತ್ತಿದೆ.ಇಡಗುಂಜಿ ,ಮುರ್ಡೇಶ್ವರ ಯಾತ್ರಾ ಸ್ಥಳವೂ ಸೇರಿದಂತೆ ಹೊನ್ನಾವರ ತಾಲ್ಲೂಕಿನ ನಗರ ಮತ್ತು ಗ್ರಾಮೀಣ ಭಾಗದ ಸಹಸ್ರಾರು ಜನರ ಕುಡಿಯುವ ನೀರಿನ ಬವಣೆಯನ್ನು ಶರಾವತಿ ನೀಗಿಸುತ್ತಿದೆ .
ವಿದ್ಯುತ್ ಉತ್ಪಾದನೆಯ ನಂತರ ಸಮುದ್ರಕ್ಕೆ ಹರಿದು ಹೋಗುವ ನೀರಿನ ಪ್ರಮಾಣದಲ್ಲಿ ಈ ಮೇಲಿನ ಉದ್ದೇಶಕ್ಕೆ ಈಗಾಗಲೇ ಶರಾವತಿ ನದಿಯಿಂದ ಸುಮಾರು 25ಟಿ.ಎಂ.ಸಿ.ಗಿಂತ ಹೆಚ್ಚಿನ ಪ್ರಮಾಣದ ನೀರು ಸ್ಥಳೀಯವಾಗಿ ಬಳಕೆಯಾಗುತ್ತಿದೆ. ಇದರಿಂದಾಗಿ ಈ ಬಾರಿಯ ಬೇಸಿಗೆಯಲ್ಲಿ ಸಮುದ್ರದ ಉಬ್ಬರದ ಸಂದರ್ಭದಲ್ಲಿ ಶರಾವತಿಯ ನದಿ ನೀರಿಗೆ ಅರಬಿ ಸಮುದ್ರದ ನೀರು ಹಲವು ಬಾರಿ ಅಳ್ಳಂಕಿಯ ವರೆಗೆ ಉಪ್ಪುನೀರು ಸೇರ್ಪಡೆಯಾಗಿದೆ.
ಇದು ಅಪಾಯದ ಮುನ್ಸೂಚನೆಯಾಗಿದೆ ಸಿಹಿ ನೀರು ಲಭ್ಯತೆಯ ನದಿಯ ಸಾಮರ್ಥ್ಯ ಕೊನೆಗೊಂಡಿರುವುದರ ಸೂಚನೆ ಇದು. ಈ ನಡುವೆ ಭೂಗರ್ಭ ಕೊಳವೆಯ ಮೂಲಕ ಶರಾವತಿ ಆಣೆಕಟ್ಟೆಯಿಂದ ಎತ್ತರದ ತಳಕಳಲೆ ಆಣೆಕಟ್ಟೆಗೆ ನೀರನ್ನು ಮೇಲೆತ್ತಿ ವಿದ್ಯುತ ಉತ್ಪಾದಿಸುವ ಶರಾವತಿ ಪಂಪ್ಡ್ ಯೋಜನೆಗೆ ಸರ್ಕಾರ ಅನುಮತಿ ನೀಡಿರುವ ಸುದ್ದಿಯಿಂದ ಜನರಲ್ಲಿ ಗೊಂದಲ ಉಂಟಾಗಿತ್ತು.
ಆದರೆ ಈ ಯೋಜನೆಯಿಂದ ನದಿನೀರಿನ ಹರಿವಿನ ಪ್ರಮಾಣದಲ್ಲಿ ಯಾವುದೇ ಕೊರತೆ ಉಂಟಾಗದು,ವಿದ್ಯುತ ಉತ್ಪಾದನೆಯ ನಂತರದ ನೀರು ಮರಳಿ ಶರಾವತಿ ಆಣೆಕಟ್ಟೆಗೆ ಸೇರಲಿದೆ ಎನ್ನುವ . ಕೆ.ಪಿ.ಸಿ.ಯ ಸ್ಪಷ್ಟನೆಯಿಂದ ರೈತರಲ್ಲಿದ್ದ ಗೊಂದಲ ಕಡಿಮೆಯಾಗಿತ್ತು. ಆದರೆ ಭೂಗರ್ಭ ಕೊಳವೆಯ ನಿರ್ಮಾಣದಿಂದ ಪರಿಸರ ಸೂಕ್ಷ್ಮ ಶರಾವತಿ ಕಣಿವೆಯ ಪಶ್ಚಿಮ ಘಟ್ಟ ಪ್ರದೇಶದ ಸುರಕ್ಷತೆಯ ವಿಚಾರದಲ್ಲಿ ಕೆಲ ಪರಿಸರ ತಜ್ಞರು ಎತ್ತಿರುವ ಆಕ್ಷೇಪಗಳಿಗೆ ಪರ- ವಿರೋದ ಅಭಿಪ್ರಾಯಗಳು ಎದ್ದಿವೆಯಾದರೂ ಅಭಿವೃದ್ದಿಯ ಪರ ಜನ ಒಲವು ತೋರಿಸಬಹುದೆನ್ನುವ ನಿರೀಕ್ಷೆ ಇತ್ತು.
ಶರಾವತಿ ನದಿಯ ನೀರನ್ನು ರಾಜಧಾನಿ ಬೆಂಗಳೂರು ಮತ್ತು ಪೂರ್ವ ಕರ್ನಾಟಕ ಭಾಗದ ಕೆಲ ಜಿಲ್ಲೆಗಳಿಗೆ ಕುಡಿಯುವ ನೀರು ಪೂರೈಸುವ ಮತ್ತು ಆಭಾಗದ ಕೆರೆಗಳನ್ನು ತುಂಬಿಸುವ ಉದ್ದೇಶದಿಂದ ಸಾಧ್ಯತಾ ವರದಿ ಪಡೆಯಲು ಸರ್ಕಾರ ವಿಶ್ವೇಶ್ವರ ಜಲನಿಗಮದ ಮೂಲಕ ಇತ್ತೀಚೆಗೆ ಟೆಂಡರ್ ಕರೆದಿತ್ತು,
ಈಗ ಬೆಂಗಳೂರಿನ ಈ.ಐ.ಟೆಕ್ನೋಲಾಜೀಸ್ ಖಾಸಗಿ ಕಂಪೆನಿಯು ರೂ.73-00ಲಕ್ಷಕ್ಕೆ ಟೆಂಡರ್ ಪಡೆದು ಸಮೀಕ್ಷೆಗೆ ಮುಂದಾಗಿದೆ.ಆದರೆ ಸಮುದ್ರ ಸೇರತ್ತಿರುವ ಶರಾವತಿ ನದಿಯ ನೀರು ನದಿಪಾತ್ರದ ಸಾವಿರಾರು ರೈತರ ಜಮೀನಿಯ ನೀರಾವರಿಗೆ ಮತ್ತು ಹೊನ್ನಾವರ ತಾಲ್ಲೂಕಿನ ನಗರ ಮತ್ತು ಗ್ರಾಮೀಣ ಭಾಗಗಳಿಗೆ ಹಾಗೂ ಮುರ್ಡೇಶ್ವರ, ಇಡಗುಂಜಿ ಯಾತ್ರಾ ಸ್ಥಳಗಳಿಗೆ ಕುಡಿಯುವ ನೀರು ಪೂರೈಸಲು ಸುಮಾರು 25 ಟಿ.ಎಂ.ಸಿ.ಗಿಂತಲೂ ಹೆಚ್ಚಿನ ಪ್ರಮಾಣದ ನೀರು ಈಗಾಗಲೇ ಬಳಕೆಯಾಗುತ್ತಿದೆ.
ಬೇಸಿಗೆಯಲ್ಲಿ ನದಿನೀರು ಸಮುದ್ರ ಸೇರುವ ಹರಿವಿನ ಪ್ರಮಾಣ ಕಡಿಮೆಯಾಗಿದ್ದು,ಉಬ್ಬರದ ಸಂದರ್ಭದಲ್ಲಿ ಸಮುದ್ರದ ಉಪ್ಪು ನೀರು ಶರಾವತಿ ನದಿಯ 25ಕೀ.ಮೀ ಉದ್ದಕ್ಕೂ ಹಿಮ್ಮುಖವಾಗಿ ಸೇರುತ್ತಿದೆ .ಇದು ಸಿಹಿ ನೀರಿನ ಕೊರತೆಯನ್ನು ಸೂಚಿಸುವ ಪ್ರಮುಖ ಅಂಶವಾಗಿದೆ.
ಶರಾವತಿ ನದಿಪಾತ್ರದ ಸಾವಿರಾರು ರೈತರ ಮತ್ತು ಕುಡಿಯುವ ನೀರಿನ್ನು ಅವಲಂಬಿಸಿರುವ ಇಲ್ಲಿನ ಲಕ್ಷಾಂತರ ಜನರ ಹಿತದೃಷ್ಟಿಯಿಂದ ಶರಾವತಿಯಿಂದ ರಾಜಧಾನಿ ಬೆಂಗಳೂರು ಮತ್ತಿತರ ಕಡೆ ಕುಡಿಯುವ ನೀರು ಪೂರೈಸುವ ಯೋಜನೆಯನ್ನು ಸರ್ಕಾರ ಈ ಹಂತದಲ್ಲಿಯೇ ಕೈಬಿಟ್ಟು,ಈ .ಐ. ಟೆಕ್ನೋಲಾಜೀಸ್ ಕಂಪೆನಿಗೆ ನೀಡಿರುವ ಟೆಂಡರನ್ನು ಹಿಂಪಡೆಯಬೇಕೆಂದು ಅವರು ಸರ್ಕಾರವನ್ನು ಜಿಲ್ಲಾಡಳಿತವನ್ನೂ ಒತ್ತಾಯಪಡಿಸಿದ್ದಾರೆ.
ಉತ್ತರ ಕನ್ನಡ ಜಿಲ್ಲಾ ವರದಿಗಾರರು ರೂಪಾ