ವರದಿ ನಾರಾಯಣಸ್ವಾಮಿ ಸಿ.ಎಸ್
ಸರಕಾರಿ ಜಮೀನು ಕಬಳಿಸುವವರ ವಿರುದ್ಧ ಕ್ರಮ ಕೈಗೊಳ್ಳಲು ಆಗ್ರಹ
ಹೊಸಕೋಟೆ 7:
ಸೂರು ಕಲ್ಪಿಸಬೇಕು ಸೇರಿದಂತೆ ನಾನಾ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ನೂರಾರು ಮಂದಿ ಕಣ್ಣೂರಹಳ್ಳಿ ಗ್ರಾಮದಿಂದ ಹೊಸಕೋಟೆ ತಾಲೂಕು ಕಚೇರಿವರೆಗೂ ಸೋಮವಾರ ಕಾಲ್ನಡಿಗೆ ಜಾಥಾ ನಡೆಸಿದರು.
ಕರ್ನಾಟಕ ಬಿಡುಗಡೆ ಚಿರತೆಗಳ ಮಹಾ ಸಂಘದ ವತಿಯಿಂದ ಕಾಲ್ನಡಿಗೆ ಜಾಥಾ ಕೈಗೊಂಡು, ತಾಲೂಕು ಕಚೇರಿ ಮುಂದೆ ಧರಣಿ ಕೈಗೊಳ್ಳಲಾಯಿತು.
ಗ್ರಾಮದಲ್ಲಿ ದಲಿತರ ಹೆಸರಿನಲ್ಲಿ ಅಕ್ರಮ ದಾಖಲೆ ಸೃಷ್ಟಿಸಿರು ವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಅರ್ಹರಿಗೆ ಸೂರು ಒದಗಿಸಬೇಕೆಂದು ಆಗ್ರಹಿಸಲಾಯಿತು.
ಸಂಘಟನೆಯ ರಾಜ್ಯಾಧ್ಯಕ್ಷ ಶಿವರಾಜ್ ಮಾತನಾಡಿ, ಕಣ್ಣೂರಹಳ್ಳಿ ಗ್ರಾಮದ ಸ.ನಂ. 12 ಮತ್ತು 37ರಲ್ಲಿ ಸುಮಾರು 50 ಎಕರೆಗೂ ಹೆಚ್ಚು ಸರಕಾರಿ ಗೋಮಾಳ ಜಮೀನನ್ನು ದಲಿತರ ಹೆಸರಿನಲ್ಲಿ ಕಬಳಿಸಲು ಕೆಲವರು ಮುಂದಾಗಿದ್ದಾರೆ. 3ರಿಂದ 12 ವರ್ಷದ ಮಕ್ಕಳ ಹೆಸರಿನಲ್ಲಿ ಅಕ್ರಮ ದಾಖಲೆ ಸೃಷ್ಟಿಸಿದ್ದು, ತಮ್ಮ ಹೆಸರಿಗೆ ಪರಭಾರೆ ಮಾಡಿಕೊಂಡು ಸರಕಾರದ ನೂರಾರು ಕೋಟಿ ಬೆಲೆಬಾಳುವ ಜಮೀನನ್ನು ಕಬಳಿಸಲಾಗಿದೆ ಎಂದು ಆರೋಪಿಸಿದರು.
ಸರಕಾರಿ ಗೋಮಾಳ ಜಮೀನನ್ನ ಸ್ಥಳೀಯ ದಲಿತರ ಹೆಸರಿನಲ್ಲಿ ಅಕ್ರಮವಾಗಿ ಕಬಳಿಸಲು ಸಹಾಯ ಮಾಡಿರುವ ಅಕಾರಿಗಳು ಮತ್ತು ಭೂಮಾಫಿಯಾ ದವರ ವಿರುದ್ಧ ಎಸ್ಸಿ, ಎಸ್ಟಿ ಕಾಯಿದೆ ಅನ್ವಯ ದೂರು ದಾಖಲಿಸಿ ಬಂಧಿಸಬೇಕು.
ಕಬಳಿಸಿರುವ ಜಮೀನನ್ನು ವಶಪಡಿಸಿಕೊಂಡು, ಬಡವರಿಗೆ ನಿವೇಶನ ನೀಡ ಬೇಕು. ಕಣ್ಣೂರಹಳ್ಳಿ ಗ್ರಾಮದ ಸ.ನಂ.177 ಮತ್ತು 178ರ ಸರಕಾರಿ ಜಮೀನನ್ನು ಬುದ್ಧ ವಿಹಾರಕ್ಕೆ ಹಾಗೂ ಅಂಬೇಡ್ಕರ್ ಅವರ ಪುತ್ಥಳಿ ಸ್ಥಾಪನೆಗಾಗಿ ಮಂಜೂರು ಮಾಡಬೇಕು.
ಸ.ನಂ.12ರಲ್ಲಿ ನಿರ್ಮಿ ಸಿರುವ ಮನೆಗಳಿಗೆ ಹಕ್ಕುಪತ್ರ, ವಿದ್ಯುತ್, ರಸ್ತೆ, ಚರಂಡಿ, ಶೌಚಾಲಯ ನಿರ್ಮಿಸಿ ಕೊಡಬೇಕೆಂಬ ನಾನಾ ಬೇಡಿಕೆ ಈಡೇರಿಸಲು ಒತ್ತಾಯಿಸಿದರು. ತಹಸೀಲ್ದಾರ್ ಸೋಮಶೇಖರ್ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು..
ಕರ್ನಾಟಕ ಬಿಡುಗಡೆಯ ಚಿರತೆಗಳು ಜನಪರ ಮಹಾಸಂಘದ ತಾಲೂಕು ಅಧ್ಯಕ್ಷ ನಾಗರಾಜ್ ಸೇರಿದಂತೆ ಪದಾಕಾರಿಗಳು ಹಾಜರಿದ್ದರು.